ಕಪುರ್ಥಲ : ಪಂಜಾಬ್ ರಾಜ್ಯದ ಜಲಂಧರ್ ವಿಭಾಗದಲ್ಲಿರುವ ಒಂದು ಪಟ್ಟಣ. ಇದೇ ಹೆಸರಿನ ಜಿಲ್ಲೆಯ ಮುಖ್ಯ ಪಟ್ಟಣ, ತಹಸೀಲಿನ ಕೇಂದ್ರ. ಜಲಂಧರ್ ನಗರದಿಂದ ಪಶ್ಚಿಮಕ್ಕೆ 18 ಕಿಮೀ ದೂರದಲ್ಲಿದೆ. ಜಲಂಧರ್ ನಗರದೊಂದಿಗೆ ರೈಲ್ವೇ ಮತ್ತು ರಸ್ತೆ ಸಂಪರ್ಕವಿದೆ. ಈ ಪಟ್ಟಣದ ಜನಸಂಖ್ಯೆ 84,361(2001). ಇಲ್ಲಿ ಸುಂದರವಾದ ಅರಮನೆ ಮತ್ತು ಉದ್ಯಾನಗಳೂ ಕಾಲೇಜು ಮತ್ತು ಆಸ್ಪತ್ರೆಗಳೂ ಇವೆ. ಈ ಪಟ್ಟಣ 11ನೆಯ ಶತಮಾನದಲ್ಲಿ ಸ್ಥಾಪಿತವಾಯಿತು. 1780ರಲ್ಲಿ ಸರ್ದಾರ್ ಜಸ್ಸಾಸಿಂಗ್ ಇದನ್ನು ಗೆದ್ದುಕೊಂಡ. ಅಂದಿನಿಂದ 1948ರ ವರೆಗೆ ಇದು ಕಪುರ್ಥಲ ಸಂಸ್ಥಾನದ ರಾಜಧಾನಿಯಾಗಿತ್ತು. 

ಕಪುರ್ಥಲ  ಜಿಲ್ಲೆಯ ವಿಸ್ತೀರ್ಣ 902.09 ಚ.ಕಿಮೀ. ಹಿಂದಿನ ಕಪುರ್ಥಲ ಸಂಸ್ಥಾನದ ವಿಸ್ತೀರ್ಣ ಈ ಜಿಲ್ಲೆಯಷ್ಟೇ ಇತ್ತು. ಇದು ಜಲಂಧರ್ ಜಿಲ್ಲೆಯ ವಾಯವ್ಯಕ್ಕೆ ಬೀಯಾಸ್ ನದಿಯಗುಂಟ ಹಬ್ಬಿದೆ. ಇದು ವ್ಯವಸಾಯ ಪ್ರಧಾನವಾದ ಜಿಲ್ಲೆ. ಗೋದಿ, ಕಡಲೆ, ಹತ್ತಿ ಮತ್ತು ಕಬ್ಬು ಮುಖ್ಯ ಬೆಳೆ.
ಸುಲ್ತಾನ್ಪುರ ಮತ್ತು ಫಗ್ವಾರ ಈ ಜಿಲ್ಲೆಯ ಇನ್ನೆರಡು ಪಟ್ಟಣಗಳು. ಜನಸಂಖ್ಯೆ ಕ್ರಮವಾಗಿ 52,389 ಮತ್ತು 95,626 (2001). ಫಗ್ವಾರ ಮುಖ್ಯ ವ್ಯಾಪಾರ ಕೇಂದ್ರ. ವ್ಯವಸಾಯದ ಉಪಕರಣ, ಹತ್ತಿ ಮತ್ತು ಸಕ್ಕರೆ ಕಾರ್ಖಾನೆಗಳಿವೆ. ಸುಲ್ತಾನ್ಪುರ ಕೈಮಗ್ಗದ ಬಟ್ಟೆಗಳಿಗೆ ಪ್ರಸಿದ್ಧ.                                  	(ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ